
23rd April 2025
ಯಾದಗಿರಿ : ಕನ್ನಡದ ಆದ್ಯ ವಚನಕಾರ ದೇವರ ದಾಸಿಮಯ್ಯ ಜನ್ಮಸ್ಥಳ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮುದನೂರ.ಬಿ ಗ್ರಾಮದಲ್ಲಿರುವ ಕ್ಷೇತ್ರವನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಸಮಗ್ರ ಅಭಿವೃದ್ಧಿಪಡಿಸಿ ಪ್ರವಾಸೋಧ್ಯಮ ಕ್ಷೇತ್ರವನ್ನಾಗಿ ಮಾರ್ಪಡಿಸಿ ಎಂದು ಕರ್ನಾಟಕ ರಾಜ್ಯ ಹಟಗಾರ ಸಮಾಜದ ಅಧ್ಯಕ್ಷ ಆರ್.ಸಿ ಗಾಳೆ ನೇತೃತ್ವದಲ್ಲಿ ನಿಯೋಗ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಅವರ ಕಛೇರಿಯಲ್ಲಿ ಸಚಿವರನ್ನು ಹಾಗೂ ರಾಯಚೂರ ಸಂಸದ ಜಿ. ಕುಮಾರ ನಾಯಕ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯದಲ್ಲಿಯೇ ದಾಸಿಮಯ್ಯ ಕ್ಷೇತ್ರ ಹಲವಾರು ವಿಶೇಷಗಳಿಂದ ಕೂಡಿದೆ, ೭ ಪುಸ್ಕರಣಿಗಳಿವೆ, ಸರ್ಕಾರ ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗೆ ೫ ಕೋಟಿ ರೂ. ಮಂಜೂರು ಮಾಡಿದೆ, ಅದರಲ್ಲಿ ೩ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ, ಈಗಾಗಲೇ ಅಲ್ಲಿ ೪ ಪುಸ್ಕರಣಿಗಳನ್ನು ಅಭಿವೃದ್ಧಿಪಡಿಸಲಾಗಿದೆ, ಭವ್ಯ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ, ಆದರೆ ಭಕ್ತರನ್ನು ಕಾಡುತ್ತಿರುವ ಪ್ರಮುಖ ಪ್ರಶ್ನೆ ಏನೆಂದರೇ ದೇವಸ್ಥಾನದ ಮೇಲೆ ಗ್ರಾಮದ ಜನರು ೧೬೦ ಮನೆಗಳನ್ನು ಕಟ್ಟಿಕೊಂಡಿದ್ದಾರೆ, ಇದರಿಂದ ಅಭಿವೃದ್ಧಿಗೆ ತೊಂದರೆಯಾಗತ್ತಿದೆ, ಕೂಡಲೇ ಸ್ಥಳಾಂತರಿಸಬೇಕು ಎಂದು ವಿವರಿಸಿದರು.
ಈ ಹಿಂದೆ ಅಲ್ಲಿ ಶಾಸಕರ ಅನುದಾನದಲ್ಲಿ ಸಭಾ ಭವನ ನಿರ್ಮಾಣ ಮಾಡಲಾಗಿದೆ, ಆದರೆ ಆ ನಿವೇಶನ ನೀಡಿದ ಮಾಲಿಕ ಒತ್ತುವರಿ ಮಾಡಿಕೊಂಡಿದ್ದಾನೆ, ಅವನಿಂದ ಬಿಡಿಸಬೇಕು, ಜಿಲ್ಲಾಡಳಿತದಿಂದ ಈಗಾಗಲೇ ಗ್ರಾಮದ ಹೊರ ವಲಯದಲ್ಲಿ ೧೦ ಎಕರೆ ಜಮೀನು ಮಂಜೂರಿ ಮಾಡಲಾಗಿದೆ, ಅಲ್ಲಿ ೨೦೦ ಮನೆಗಳನ್ನು ನಿರ್ಮಾಣ ಮಾಡಲು ಲೆಔಟ್ ಅಭಿವೃದ್ಧಿ ಪಡಿಸಿಬೇಕು.
ಈಗಾಗಲೇ ಜಿಲ್ಲಾಡಳಿತದಿಂದ ೪ ಪುಸ್ಕರಣಿಗಳನ್ನು ಅಭಿವೃದ್ಧಿಪಡಿಸಲಾಗಿದೆ, ಅದರಂತೆ ಇನ್ನೂಳಿದ ಮರಳುತೀರ್ಥ, ಲಕ್ಷö್ಮಣತೀರ್ಥ, ಸಂಗಮ ತೀರ್ಥ ಪುಸ್ಕರಣಿಗಳನ್ನು ಅಭಿವೃದ್ಧಿಪಡಿಸಬೇಕು, ಇದರಿಂದ ಪ್ರವಾಸಿಗರಿಗೂ ಹಾಗೂ ರೈತರಿಗೂ ಅನುಕೂಲತೆಯಾಗುತ್ತದೆ ಎಂದು ಮನವಿ ಮಾಡಿದರು.
ಮುಜರಾಯಿ ಇಲಾಖೆಯಿಂದ ಜಿಲ್ಲಾಧಿಕಾರಿ ಖಾತೆಗೆ ಬಿಡುಗಡೆಯಾದ ೨ ಕೋಟಿ ರೂ. ಅನುದಾನ ಜಮಾ ಮಾಡಬೇಕು, ದೇವಸ್ಥಾನ ಸುತ್ತ-ಮುತ್ತ ಸ್ಥಳ ಸರ್ವೇ ಮಾಡಿಸಿ, ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿಯೋಗದೊಂದಿಗೆ ಮಾತನಾಡಿದ ಸಚಿವ ದರ್ಶನಾಪೂರ, ದಾಸಿಮಯ್ಯ ಕ್ಷೇತ್ರ ಒಂದು ಸುಂದರ ನಿಸರ್ಗದಲ್ಲಿದೆ, ಆ ಕ್ಷೇತ್ರ ಅಭಿವೃದ್ಧಿಪಡಿಸಬೇಕೆಂಬುದು ಸರ್ಕಾರದ ಅಭಿಲಾಷೆಯಾಗಿದೆ, ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ನಾನು, ಸಂಸದರು ಸೂಚನೆ ನೀಡಿದ್ದೇವೆ, ಅಲ್ಲದೇ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಿದ್ದೇವೆ, ಎಲ್ಲದಕ್ಕೂ ಗ್ರಾಮಸ್ಥರು ಸಹಕರಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಮಾತನಾಡಿ, ಸಮಸ್ಯೆ ಪರಿಹಾರಕ್ಕೆ ನಾನು ಎಲ್ಲಾ ಹಂತಗಳಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದೇನೆ, ನಿಮ್ಮೇಲ್ಲರ ಅಪೇಕ್ಷೆಯಂತೆ ದಾಸಿಮಯ್ಯ ಕ್ಷೇತ್ರವನ್ನು ಪ್ರವಾಸೋಧ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಸಂಸದರ ಜೊತೆ ಮಾತನಾಡಿದ ಮುಖಂಡರು, ನಾಡಿಗೆ ದಾಸಿಮಯ್ಯನವರು ಮಾನವೀಯ ಮೌಲ್ಯಗಳ ವಚನಗಳನ್ನು ರಚಿಸಿ, ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ, ಆ ಕ್ಷೇತ್ರದಲ್ಲಿ ಭವ್ಯ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ನಿಯೋಗದಲ್ಲಿ ದೇವರ ದಾಸಿಮಯ್ಯ ವಿಚಾರ ವೇದಿಕೆಯ ಅಧ್ಯಕ್ಷ ಶಾಂತರಡ್ಡಿ ಚೌದ್ರಿ ಮುದನೂರ, ಪ್ರಭುಗೌಡ ಹರನಾಳ, ಚನ್ನಯ್ಯಸ್ವಾಮಿ ಹಿರೇಮಠ, ರಮೇಶ ಸಾಹು ಕೊಳ್ಳಿ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ, ಪ್ರಧಾನ ಕಾರ್ಯದರ್ಶಿ ಬಸ್ಸುಗೌಡ ಬಿಳ್ಹಾರ, ಭೀಮರಾಯ ಠಾಣಾಗುಂದಿ ಇತರರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧಗಳ ತಡೆಗೆ ಸೂಕ್ತ ಕ್ರಮ ಸಹಾಯವಾಣಿ-೧೯೩೦ ಹಾಗೂ ವೆಬ್ಬಾಟ್ ಉನ್ನತೀಕರಣ
ಏ.24 ರಂದು ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ
ಅಲೆಮಾರಿ ಸಮುದಾಯ ಜನರಿಗೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಲಾಗಿದೆ ಜಾಗೃತಿ ಮೂಡಿಸಿ ಸವಲತ್ತು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು -ಪಲ್ಲವಿ ಜಿ.